ಆಲೇಖ್ಯ

ಯಾವುದಾದರೊಂದು ಹಿನ್ನೆಲೆಯಲ್ಲಿ ಸರಳವಾಗಿ ಅಥವಾ ಸಂಕೀರ್ಣವಾಗಿ ಗುರುತು ಮಾಡಿಕೊಂಡ ಮಾನಸ ಪ್ರತಿಬಿಂಬದ ಪ್ರತಿಕೃತಿ (ಡಿಸೈನ್), ಕಲಾವಿದರು ವರ್ಣಸಂಪನ್ನವಾದ ಜಲ ಅಥವಾ ತೈಲಚಿತ್ರಗಳನ್ನು ಆರಂಭಿಸುವ ಮುನ್ನ ಹೀಗೆ ಸ್ಥೂಲವಾಗಿ ರೇಖಾಮಯವಾದ ಆಲೇಖ್ಯವೊಂದನ್ನು ಸಿದ್ಧಮಾಡುವ ಪರಿಪಾಠವಿದೆ. ಇಂಥ ಅಲೇಖ್ಯಗಳಿಗೆ ಪೂರ್ವಸಿದ್ಧತೆಯ ಪ್ರಯೋಜನವಷ್ಟೆ ಇರುವುದು. ಶಿಲ್ಪ ಅಥವಾ ವಾಸ್ತುವನ್ನು ಸಿದ್ಧಪಡಿಸುವ ಮುನ್ನ ಕೂಡ ಅಂಥ ಆಲೇಖ್ಯಗಳನ್ನು ಬರೆದು ಸಂಪೂರ್ಣವಾದ ಕೃತಿ ಹೇಗೆ ಕಾಣುವುದೆಂದು ನಿರ್ಧರಿಸುತ್ತಾರೆ. ಇದಕ್ಕೆ ಕೆಲವೊಮ್ಮೆ ಸ್ವತಂತ್ರವಾದ ಮೌಲ್ಯವುಂಟು. ಕಲಾವಿದರು ತಮ್ಮ ಪರ್ಯಟನೆಯಲ್ಲಿ ತಾವು ಮೆಚ್ಚಿಕೊಂಡ ಪ್ರಸಂಗಗಳನ್ನು, ದೃಶ್ಯಗಳನ್ನು, ವಸ್ತುಗಳನ್ನು ಅನುಭವದ ತರುಣದಲ್ಲೇ ಬರೆದಿಟ್ಟುಕೊಳ್ಳುತ್ತಾರೆ. ಒಡನೆಯೇ ಸಂಪನ್ನವಾದ ಕಲಾಕೃತಿಯನ್ನು ನಿರ್ಮಾಣ ಮಾಡುವ ಸೌಲಭ್ಯವಾಗಲೀ, ಅವಕಾಶವಾಗಲೀ ಇರುವುದಿಲ್ಲ. ಕೇವಲ ಸ್ಮರಣೆಯ ಯದೃಚ್ಚೆಗೆ ಬಿಡುವುದಕ್ಕಿಂತ ಆಗಲೇ ನೆನಪನ್ನು ಉದ್ಭೋಧನಗೊಳಿಸಲು ಮೈಮೇರೆಯ ರೇಖೆಗಳನ್ನು, ನೆರಳು ಬೆಳಕುಗಳ ವಿನ್ಯಾಸವನ್ನು ಬರೆದುಕೊಳ್ಳುತ್ತಾರೆ. ಮುಂದೆ ಬಿಡಿಸುವ ಚಿತ್ರಕ್ಕೆ ಇದು ನಕ್ಷೆಯಂತೆ ಇರುತ್ತದೆ.
ಕಲೆಯ ಇತಿಹಾಸದಲ್ಲಿ ಆಲೇಖ್ಯವೇ ಮೊದಲನೆಯ ಹಂತವೆಂದು ಸ್ಪಷ್ಟವಾಗಿದೆ. ಆದಿಮಾನವರು ಗುಹೆಯ ಒಳಗಡೆ ಬಂಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿರುವುದು ಆಲೇಖ್ಯದ ಶೈಲಿಯಲ್ಲಿಯೇ ಇವೆ. ಆದರೆ ಇವನ್ನು ಸಂಪೂರ್ಣ ಮಾಡುವ ಉದ್ದೇಶವಾಗಲೀ ಇವುಗಳ ಆಧಾರದ ಮೇಲೆ ಸಂಪನ್ನವಾದ ಚಿತ್ರUಳನ್ನು ಸಿದ್ಧ ಮಾಡುವ ಆಕಾಂಕ್ಷೆಯಾಗಲೀ ಇರುವ ಸಂಭವವಿಲ್ಲ. ಇಂಥ ಆಲೇಖ್ಯವನ್ನು ಸದ್ಯಸ್ವರೂಪದ ಅಭಿವ್ಯಕ್ತಿ ಎಂದು ನಿರ್ದೇಶಿಸುತ್ತಾರೆ. ಮನೋಭಿತ್ತಿಯಲ್ಲಿ ಮೂಡಿ ಬಂದ ಬಿಂಬವನ್ನು ಬಾಹ್ಯ ವ್ಯವಧಾನದಲ್ಲಿ ನಿಲ್ಲಿಸುವುದೇ ಇಲ್ಲಿನ ಆಶಯ. ಇಟಲಿ ಪುನರುಜ್ಜೀವನಯುಗದ ಕಲಾವಿಮರ್ಶಕರು ಆಲೇಖ್ಯವೇ ಕಲಾಸೃಷ್ಟಿಯ ಪರಾಕಾಷ್ಟೆ ಎಂದು ಪರಿಗಣಿಸಿದರು. ಎಂದರೆ ಆಲೇಖ್ಯದಲ್ಲಿಯೇ ಸೌಂದರ್ಯದ ಅಪರೋಕ್ಷಾಭೂತಿ ಅಡಗಿರುತ್ತದೆ. ಈ ಕಾರಣದಿಂದ ಆಲೇಖ್ಯವನ್ನು ಅಸಂಪೂರ್ಣ ಎಂದಾಗಲೀ ಅಪ್ರಗಲ್ಭ ಎಂದಾಗಲೀ ಕೇವಲ ಆರಂಭಕ್ರಿಯೆ ಎಂದಾಗಲೀ ಹೇಳುವುದು ಸಲ್ಲದು. ಅದು ಕಲಾವಿದನ ಮನಸ್ಸಿನಲ್ಲಿ ಸ್ಫೂರ್ತಿಯಿಂದ ಒದಗಿದ ಅನುಭವದ ಅಭಿವ್ಯಕ್ತಿ.

ಆಲೇಖ್ಯದಲ್ಲಿ ಮೂಡಿಬಂದ ಗೆರೆಗಳು ಚಿತ್ರದ ಮೇಲ್ಮೈ (ಕಾಂಟೊರ್) ಆಗಿ ಪರಿಣಮಿಸುತ್ತದೆ. ದೃಶ್ಯವಸ್ತುವಿನ ವಿವಿಧಮುಖಗಳನ್ನೂ ವಿವಿಧವಿವರಗಳನ್ನೂ ಅನುಭವದ ಬಟ್ಟೆಯಲ್ಲಿ ಇಳಿಸಿ ವಸ್ತುವಿನ ಒಂದು ಸಮಷ್ಟಿಬಿಂಬವನ್ನು ಒದಗಿಸಿ ಕೊಡುವುದೇ ಈ ಮೇಲ್ಮೈಯ ಪ್ರಯೋಜನ. ದೃಗ್ಗೋಚರವಾಗುವ ಭಂಗಿಯನ್ನು ಅವಕಾಶ (ಸ್ಪೇಸ್) ಸಂಬಂಧದಲ್ಲಿ ನಿಲ್ಲಿಸಿ ಅವಿಕಾರ್ಯವಾದ ನೆಲೆಯನ್ನು ವಸ್ತುವಿಗೆ ಇದು ಒದಗಿಸಿಕೊಡುತ್ತದೆ. ಮೂಡಿಸಿದ ರೇಖೆಗಳೆಲ್ಲವೂ ಮೇಲ್ಮೈ ಆಗಿ ಉಳಿಯಲೇ ಬೇಕೆಂಬ ನಿಯಮವಿಲ್ಲ. ಘನರೂಪ ಬಂದಾಗ ಮೇಲ್ಮೈ ಒದಗಿಬರುತ್ತದೆ. ರೇಖೆಗಳಲ್ಲಿ ಚಲನೆ, ವೇಗ, ನಯ, ಮಾರ್ದವ, ಕಾಠಿನ್ಯ ಮುಂತಾದ ವಿವರಗಳನ್ನು ತೋರಿಸುವುದು ಸಾಧ್ಯ. ಆಕಾರ, ಪ್ರಮಾಣ, ಭಾರಗಳನ್ನು ಮೇಲ್ಮೈ ತೋರಿಸಬೇಕು. ಕಲೆಗಾರನ ಅಗತ್ಯದ ಮೇಲೆ, ಉದ್ದೇಶದ ಮೇಲೆ ಅವನು ಯಾವ ಸಾಮಗ್ರಿಯನ್ನು ಆಲೇಖ್ಯವಾಗಿ ಬಳಸಬೇಕೆಂಬುದು ನಿಶ್ಚಯವಾಗುತ್ತದೆ. ಮೇಲ್ಮೈ ಸ್ಪುಟವಾಗಿರಬೇಕಾದರೆ ರೇಖೆಗಳನ್ನು ಲೆಕ್ಕಣಿಕೆಯಲ್ಲಿ ಕರಿಶಾಯಿಯಿಂದ ಮೂಡಿಸುತ್ತಾರೆ. ವರ್ಣಚಿತ್ರಕ್ಕೆ ಪೂರ್ವಭಾವಿಯಾಗಿ ಮಾತ್ರ ಆಲೇಖ್ಯವಿರಬೇಕಾದರೆ ಬಣ್ಣದ ಪೆನ್ಸಿಲ್‍ನಿಂದಲೋ (ಕ್ರೇಯಾನ್) ಬಣ್ಣದ ಇದ್ದಲಿನಿಂದಲೋ ವರ್ಣಚಿತ್ರದ ಕಾಗದ, ಕ್ಯಾನ್ವಾಸ್, ಗೋಡೆ, ಮರಗಳ ಮೇಲೆ ರೇಖೆಗಳನ್ನು ಬಿಡಿಸಿಕೊಳ್ಳುತ್ತಾರೆ. ಅನಂತರ ವರ್ಣಗಳನ್ನು ಮೂಡಿಸುವಾಗ ಈ ರೇಖೆಗಳು ಮರೆಯಾಗುತ್ತವೆ. 18 ನೆಯ ಶತಮಾನದಲ್ಲಿ ಕಟ್ಲ್ ಮೀನಿನಿಂದ ಬರುವ ಬಣ್ಣದಿಂದ ಸಿಪಿಯಾವನ್ನು ತಯಾರಿಸಿ ಅದರಿಂದ ಆಲೇಖ್ಯವನ್ನು ಮಾಡುತ್ತಿದ್ದರು. ಡ್ಯೊರರ್ ಮುಂತಾದ ಪ್ರಸಿದ್ಧ ಕಲಾವಿದರು ನೀಲಿಬಣ್ಣದ ಕಾಗದದ ಮೇಲೆ ಚೀಣೀ ಬಿಳಿಬಣ್ಣವನ್ನು ಉಪಯೋಗಿಸಿ ಕುಂಚದ ಕೊನೆಯಿಂದ ಬಿಡಿಸುತ್ತಿದ್ದರು. 16ನೆಯ ಶತಮಾನದ ಇಟಲಿ ದೇಶದಲ್ಲಿ ಫ್ಲಾರೆನ್ಸ್ ಮತ್ತು ಅಂಬ್ರಿಯ ಕಲೆಗಾರರು ಬೆಳ್ಳಿಕಡ್ಡಿಯಿಂದ ಆಲೇಖ್ಯವನ್ನು ತಯಾರಿಸುತ್ತಿದ್ದರು. ಇದು ಪೂರ್ವಸಿದ್ಧವಾದ ಕಾಗದದ ಮೇಲೆ ಗೆರೆಗಳನ್ನು ಮೂಡಿಸುತ್ತಿತ್ತು. ಚಿತ್ರ ಸಂಪೂರ್ಣವಾದ ಮೇಲೂ ಈ ಗೆರೆಗಳು ಕಾಣಬರುತ್ತಿದ್ದುವು. ಇದನ್ನು ಶಾಯಿಯಲ್ಲಿಯೋ ಇದ್ದಿಲಿನಲ್ಲಿಯೋ ಮುಚ್ಚಿ ಮೇಲ್ಮೈಯಂತೆ ತೋರಿಸುತ್ತಿದ್ದರು. ರ್ಯಾಫೆಲ್‍ನ ಪ್ರವಾಸ ಪುಸ್ತಕದಲ್ಲಿ ಈ ರೀತಿಯ ಆಲೇಖ್ಯಗಳೇ ಇದ್ದುವು. ಸಣ್ಣ ಪ್ರಮಾಣದ ಆಲೇಖ್ಯವನ್ನು ಅವಲಂಬಿಸಿ ಚಿತ್ರಕ್ಕಾಗಿ ದೊಡ್ಡ ಪ್ರಮಾಣದ ಕಾರ್ಟೂನ್‍ಗಳನ್ನು ತಯಾರಿಸುವ ಪದ್ಧತಿಯೂ ಇದೆ. 19ನೆಯ ಶತಮಾನದಿಂದೀಚೆಗೆ ಗ್ರಾಫೈಟ್ ಸೀಸದಕಡ್ಡಿಯನ್ನು ಆಲೇಖ್ಯಕ್ಕಾಗಿ ಉಪಯೋಗಿಸುವ ಪರಿಪಾಠ ವಿಶೇಷವಾಗಿ ಬೆಳೆದುಬಂದಿದೆ. ಕಲೆಗಾರನ ಮನೋಧರ್ಮ ಯಾವ ಸಾಮಗ್ರಿಯನ್ನು ಹಿಡಿಯಬೇಕೆಂದು ನಿರ್ಧರಿಸುತ್ತದೆ. 

ಕಲಾ ವಿದ್ಯಾರ್ಥಿ ಅಭ್ಯಾಸದ ದೃಷ್ಟಿಯಿಂದ ಆಲೇಖ್ಯಗಳನ್ನು ವಿಶೇಷವಾಗಿ ತಯಾರಿಸುತ್ತಾನೆ. ಇದು ಉದ್ದೇಶ ಸಾಧನೆಗೆಂದು ಅಳವಡಿಸಿಕೊಂಡ ಸಂವಿಧಾನ ಎಂದು ನಿರ್ದೇಶಿಸುತ್ತಾರೆ. ಕೆಲವೊಮ್ಮೆ ಸಂಪನ್ನವಾದ ಚಿತ್ರವೊಂದು ಯಾವ ಯಾವ ಹಂತಗಳಲ್ಲಿ ಹೇಗೆ ವಿಕಾಸಗೊಂಡಿದೆ ಎಂಬುದನ್ನು ವಿವರಿಸಲು ಆಲೇಖ್ಯಗಳು ನೆರವಾಗುತ್ತವೆ. ಕಲಾ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕಲಾವಿದರ ಆಲೇಖ್ಯಗಳನ್ನು ಈ ದೃಷ್ಟಿಯಿಂದ ಅಧ್ಯಯನ ಮಾಡುತ್ತಾರೆ. ಕಲೆಗಾರನೇ ತನ್ನ ಕಲ್ಪನೆಗಳು ಮೂಡಿಬಂದಂತೆ, ಬಿಂಬ ಹೆಚ್ಚು ಹೆಚ್ಚು ಸ್ಪಷ್ಟವಾದಂತೆ ಹಲವಾರು ಆಲೇಖ್ಯಗಳನ್ನು ಸಿದ್ಧಮಾಡುತ್ತಾನೆ. ಕಡೆಯಲ್ಲಿಯೇ ಚಿತ್ರ ಸಂಪನ್ನವಾದಂತೆ ಹಲವಾರು ಆಲೇಖ್ಯಗಳನ್ನು ಸಿದ್ಧಮಾಡುತ್ತಾನೆ. ಕಡೆಯಲ್ಲಿಯೇ ಚಿತ್ರ ಸಂಪನ್ನವಾಗುವುದು. ಕಲೆಗಾರನ ಪ್ರತಿಭೆಯನ್ನು ಅರಿಯಬೇಕಾದರೆ ಈ ಆಲೇಖ್ಯಗಳ ವಿಶ್ಲೇಷಣೆ ಅಗತ್ಯವಾಗುತ್ತದೆ. ಏಕೆಂದರೆ ಆಲೇಖ್ಯಗಳಲ್ಲಿಯೇ ಕಲೆಗಾರನ ಪ್ರತಿಭೆ ಪ್ರಪ್ರಥಮವಾಗಿ ಅಭಿವ್ಯಕ್ತವಾಗುವುದು.

ಇದಲ್ಲದೆ ಮಧ್ಯಕಾಲದ ಯೂರೋಪಿನಲ್ಲಿ ಹೆಸರಾಂತ ಕಲೆಗಾರರು ತಮ್ಮ ಚಿತ್ರಗಳು ಸಂಪೂರ್ಣವಾದ ಅನಂತರ ಅವಕ್ಕಾಗಿ ಸಿದ್ಧಪಡಿಸಿಕೊಂಡಿದ್ದ ಆಲೇಖ್ಯಗಳನ್ನು ತಮಗೆ ಆಶ್ರಯ ನೀಡಿದ್ದ ದೊರೆಗೋ, ಶ್ರೀಮಂತನಿಗೋ, ರಸಿಕನಿಗೋ ಕಾಣಿಕೆಯಾಗಿ ಕೊಡುವ ಸಂಪ್ರದಾಯವಿತ್ತು. ಸುಸಂಸ್ಕøತನಾದ ನಾಗರಿಕ ಇಂಥ ಆಲೇಖ್ಯಗಳನ್ನು ಸಂಗ್ರಹಿಸಲು ತವಕಪಡುತ್ತಿದ್ದ. ಸಭ್ಯತೆಯ ಲಕ್ಷಣವೆಂದು ಈ ಹವ್ಯಾಸ ಪರಿಗಣಿತವಾಗಿತ್ತು. ಈ ಅಗತ್ಯದಿಂದಾಗಿ ಯೂರೋಪ್ ದೇಶದಲ್ಲೂ ಪ್ರಾಚ್ಯದೇಶಗಳಲ್ಲೂ ಆಲೇಖ್ಯ ನಿರ್ಮಾಣವೇ ವೃತ್ತಿಯಾಗಿ ಉಳ್ಳ ಕಲೆಗಾರರಿದ್ದರು. ಪ್ರಾಚೀನ ಕಲೆಗಾರರೆಂದು ಹಲವಾರು ಮೋಸಗಾರರು ಆಲೇಖ್ಯದ ಪ್ರತಿಕೃತಿಗಳನ್ನು ಮಾಡಿ ಮಾರುವ ವ್ಯವಹಾರವೂ ತಲೆದೋರಿತು. 

ಆಲೇಖ್ಯದ ಉಗಮ ಹೇಗೆ ಆಯಿತೆಂಬುದು ಮಾನವಶಾಸ್ತ್ರ ಪರಿಣತರಿಗೆ ಜಿe್ಞÁಸೆಯ ವಿಷಯವಾಗಿದೆ. ಆದಿಮಾನವರು ಬಂಡೆಗಳ ಮೇಲೆ, ಆದಿವಾಸಿಗಳು ನೆಲದ ಮೇಲೆ ಪ್ರಾಣಿಗಳ, ಮನುಷ್ಯರ ಆಕಾರದಲ್ಲಿ ಗೆರೆಗಳನ್ನು ಮೂಡಿಸಿ ಆಲೇಖ್ಯವನ್ನು ಸಿದ್ಧಪಡಿಸಿದರೆ ಈ ಪ್ರವೃತ್ತಿಯ ಮೂಲ ಏನು? ಇವರು ಕಲಾವಿಲಾಸಿಗಳಾಗಿದ್ದರೆನ್ನಲು ಅಥವಾ ಕಲೆ ಆ ಕಾಲದಲ್ಲಿ ಸಂಪನ್ನವಾದ ಉದ್ಯಮವಾಗಿದ್ದಿತೆನ್ನಲು ಆಧಾರ ಸಾಲದು. ಐಂದ್ರಜಾಲಿಕ ಉದ್ದೇಶಗಳನ್ನು ಕೆಲವರು ಆರೋಪಿಸುತ್ತಾರೆ. ಮತ್ತೆ ಕೆಲವರು ಬಣ್ಣ, ರೂಪ, ಸಮಭಂಗ ಇವುಗಳನ್ನು ಆದಿಮಾನವ ದೃಶ್ಯಪ್ರಸಂಗಗಳಲ್ಲಿ ನೋಡಿ ಸುಖಪಟ್ಟು ಅವನ್ನು ಉಳಿಸಲು ಆಲೇಖ್ಯಗಳನ್ನು ಸಿದ್ಧ ಮಾಡಿದನೆನ್ನುತ್ತಾರೆ. ಪ್ರಕೃತಿಯ ವಸ್ತುಗಳಂತೆಯೇ ಪ್ರಸಂಗಗಳನ್ನು ಅನುಕರಿಸಿಯೇ ಆದಿಯ ಆಲೇಖ್ಯಗಳಿರುವುದು ಸ್ವಾರಸ್ಯವಾಗಿದೆ. ಆದಿವಾಸಿ ಜನಾಂಗಗಳು ಎಲ್ಲೇ ಇರಲಿ, ಯಾವುದೇ ಸಂಸ್ಕøತಿಯಿಂದ ಪ್ರಭಾವಿತರಾಗಿರಲಿ ಅವರ ಆಲೇಖ್ಯಗಳು ಹೆಚ್ಚೂ ಕಡಿಮೆ ಒಂದೇ ಬಗೆಯಲ್ಲಿರುವುದೂ ಗಮನಾರ್ಹ. ಈ ವಿವರದಿಂದ ಆಲೇಖ್ಯ ನಿರೂಪಣೆಗೆ ಮೂಲಪ್ರವೃತ್ತಿಯನ್ನು ಹೇಳುತ್ತಾರೆ.

ಈಜಿಪ್ಟ್ ದೇಶದ ಪ್ರಾಚೀನ ಇತಿಹಾಸದಲ್ಲಿ ಹಳೆಯ ಜೇಡಿಮಣ್ಣಿನ ಮುದ್ರಿಕೆಗಳಲ್ಲೂ 'ಪೇಪರಿ' ಸುರುಳಿಗಳಲ್ಲೂ ಕಟ್ಟಡಗಳ ನಕ್ಷೆಯಿರುವುದು ಕಂಡುಬಂದಿದೆ. ಕಟ್ಟಡಗಳನ್ನು ನಿರ್ಮಾಣ ಮಾಡುವುದಕ್ಕೆ ಮುನ್ನ ಪೂರ್ವಭಾವಿಯಾಗಿ ಈ ನಕ್ಷೆಗಳನ್ನು ಸಿದ್ಧಮಾಡಿರಬಹುದು. ಸಮಾಧಿಮಂದಿರಗಳಲ್ಲಿ ಭಿತ್ತಿಚಿತ್ರಗಳು ವಿವಿಧ ವರ್ಣರಂಜಿತವಾಗಿ ಬೃಹದಾಕಾರದಲ್ಲಿ ಬಂದಿವೆಯಷ್ಟೆ. ಇವುಗಳ ಬಳಿಯಲ್ಲಿ ಮಡಕೆ ಚೂರುಗಳ ಮೇಲೆ ಸಣ್ಣ ಪ್ರಮಾಣದಲ್ಲಿ ಅದೇ ಚಿತ್ರಗಳ ಸ್ಥೂಲ ವಿವರಗಳು ಇರುವುದು ಸ್ವಾರಸ್ಯವಾದ ವಿವರ. ಇಲ್ಲಿ ಆಲೇಖ್ಯದ ಪ್ರಯೋಜನ ಪೂರ್ವಸಿದ್ಧತೆ, ಪ್ರಯೋಗ, ನೆರವು ನೀಡುವ ವ್ಯವಧಾನ. ಹೀಗೆಯೇ ರೋಮ್ ನಗರದ ನಕ್ಷೆಯನ್ನು ಚಕ್ರವರ್ತಿ ಸೆಪ್ಟಿಮಿಯಸ್ ಸೆವೆರಸ್‍ನ ಕಾಲದಲ್ಲಿ ಹಾಲುಗಲ್ಲಿನ ಮೇಲೆ ಕೊರೆತದಿಂದ ಮೂಡಿಸಿದ್ದುದು ದೊರೆತಿದೆ. ರೋಮನ್ ಶಿಲ್ಪಿಗಳಲ್ಲೂ ಶಿಲ್ಪಕ್ರಿಯೆಯಲ್ಲಿ ಪೂರ್ವಭಾವಿಯಾಗಿ ಆಲೇಖ್ಯಗಳನ್ನು ಬರೆದಿಟ್ಟುಕೊಳ್ಳುತ್ತಿದ್ದ ಪದ್ಧತಿಯಿದ್ದಂತೆ ತಿಳಿದುಬರುತ್ತದೆ. ಇಂಥ ಆಲೇಖ್ಯಗಳೂ ದೊರೆತಿವೆ. ಪ್ರಾಚೀನ ಯುಗದಲ್ಲಿ ಆಲೇಖ್ಯಕ್ಕೂ ವರ್ಣಚಿತ್ರಕ್ಕೂ ಅಷ್ಟಾಗಿ ವ್ಯತ್ಯಾಸವಿರಲಿಲ್ಲ. ವರ್ಣಚಿತ್ರದಲ್ಲೂ ಒಂದೇ ಬಣ್ಣವನ್ನು ಉಪಯೋಗಿಸುವುದೇ ರೂಢಿಯಲ್ಲಿ ಇತ್ತು. ಕ್ರೀಟ್ ಮುಂತಾದೆಡೆ ಅರ್ಧಚಿತ್ರವನ್ನು ವರ್ಣರಂಚಿತವನ್ನಾಗಿಯೂ ಉಳಿದ ಭಾಗವನ್ನು ಕೇವಲ ಆಲೇಖ್ಯದಂತೆಯೂ ಬಿಟ್ಟಿರುವ ನಿದರ್ಶನಗಳಿವೆ. ಸಾಮೋಸ್‍ನಲ್ಲಿ ಮರದ ಹಲಗೆಗಳ ಮೇಲೆ ಮೂಡಿಸಿರುವ ಆಲೇಖ್ಯಗಳು ದೊರೆತಿವೆ. ಇವು ಕ್ರಿಸ್ತಪೂರ್ವ ಎಂಟನೆಯ ಶತಮಾನದ್ದೆಂದು ಹೇಳುತ್ತಾರೆ. ಕ್ರಿಸ್ತಪೂರ್ವ ಐದು ಆರನೆಯ ಶತಮಾನಗಳಿಗೆ ಸೇರಿದ ಹೆಂಚಿನ ಬಕ್ಕರೆಗಳ ಮೇಲೆ ಆಲೇಖ್ಯಗಳಿರುವುದು ಗ್ರೀಸ್ ದೇಶದ ವಿವಿಧ ಸ್ಥಳಗಳಲ್ಲಿ ಕಂಡುಬಂದಿದೆ. ರೋಮ್ ದೇಶದ ಭಿತ್ತಿಚಿತ್ರಗಳು ಆಲೇಖ್ಯದ ಮಾದರಿಯಲ್ಲೇ ಇದ್ದುವು. ಪಾಂಪೇನಲ್ಲಿರುವ ಕೃತಿಗಳು ಜಗದ್ವಿಖ್ಯಾತವಾಗಿವೆ. 

ಮಧ್ಯಕಾಲದ ಯೂರೋಪಿನಲ್ಲಿ ಆಲೇಖ್ಯವನ್ನು ನೆನಪಿಗೆ ನೆರವಾಗಲೆಂದು ಬಳಸುತ್ತಿದ್ದರು. ಒಂದು ತಲೆಮಾರಿನ ಸಾಂಪ್ರದಾಯಿಕ ಕಲೆಯನ್ನು ಮುಂದಿನ ತಲೆಮಾರಿಗೆ ಉಳಿಸಿಕೊಡಲು ಆಲೇಖ್ಯ ಸರಳವಾದ ಸಂವಿಧಾನವಾಗಿತ್ತು. ಈ ಕಾಲದ ಕಲೆಗಾರರು ಆಲೇಖ್ಯ ಗ್ರಂಥಗಳನ್ನು ಈ ಪ್ರಯೋಜನಗಳಾಗಿ ಸಿದ್ಧಪಡಿಸಿದ್ದುದೇ ಇಂದಿಗೂ ಉಳಿದು ಬಂದಿದೆ. ಈ ಗ್ರಂಥಗಳಲ್ಲಿ ಅತಿಪ್ರಾಚೀನವಾದುದೆಂದರೆ ಅಡೇಮರ್ ಡಿ ಛಬ್ಬನ್ನೆಯ್ಸ್ - 1030ರಲ್ಲಿ ಹಳೆಯ ಮೂರ್ತಿಗಳ ಚಿತ್ರಗಳನ್ನು ಬರೆದಿಟ್ಟಿರುವ ಗ್ರಂಥ. ಇಂಥ ಗ್ರಂಥಗಳು ಹತ್ತಾರು ದೊರೆತಿವೆ. ಇವುಗಳಲ್ಲಿ ಹಳೆಯ ಶಿಲ್ಪಗಳ ರೇಖಾಕೃತಿಗಳು, ಕಟ್ಟಡಗಳಿಗೆ ನಕ್ಷೆ, ಜೀವಂತ ಪ್ರಾಣಿಗಳನ್ನು ನೇರವಾಗಿ ಚಿತ್ರಿಸಿಕೊಂಡಿರುವುದು, ಮುಂತಾದುವು ಅಡಕವಾಗಿದೆ. ರಾಬೆರ್ಟೊ ಸಾಲ್ವಿನಿ ಎಂಬ ಪಂಡಿತ ಇವನ್ನು ಅಧ್ಯಯನ ಮಾಡಿದ್ದಾನೆ.  

ಮಧ್ಯಯುಗದಲ್ಲಿಯೇ ಬೆಳೆದುಬಂದ ಆಲೇಖ್ಯದ ಇನ್ನೊಂದು ಪ್ರಕಾರವೆಂದರೆ ಕೈಬರಹದ ಪವಿತ್ರಗ್ರಂಥಗಳಲ್ಲಿ ಆಯಾ ಪ್ರಸಂಗಗಳನ್ನು ನಿರ್ದೇಶಿಸುವ ಚಿತ್ರಗಳನ್ನೂ ಬರೆದು ಸೇರಿಸುವ ಪದ್ಧತಿ 9ನೆಯ ಶತಮಾನದ ಅಂತ್ಯ ಭಾಗದಲ್ಲಿ ಈ ಗ್ರಂಥಸ್ಥ ಆಲೇಖ್ಯಗಳು ತುಂಬ ಪ್ರಚಲಿತವಾದುವು. ಈ ಶೈಲಿ ಇಂಗ್ಲೆಂಡ್ ದೇಶವನ್ನು ಮುಟ್ಟಿ (1000) ಅಲ್ಲಿನ ಗ್ರಂಥ ಪ್ರಕಾಶನದ ಮೇಲೆ ವಿಶೇಷವಾದ ಪ್ರಭಾವವನ್ನು ಬೀರಿತು. ಸುಂದರವಾದ ಕಲಾತ್ಮಕವಾದ ಅಕ್ಷರವಿನ್ಯಾಸದಲ್ಲಿ (ಕ್ಯಾಲಿಗ್ರಫಿ) ಆಲೇಖ್ಯದ ಪಾತ್ರ ವಿಶಿಷ್ಟವಾಯಿತು. ಗ್ರಂಥದ ಒಂದು ಭಾಗದಲ್ಲಿ ಅಕ್ಷರಗಳನ್ನು ಬರೆಯದೆ ಆ ಜಾಗದಲ್ಲಿ ಚಿತ್ರಗಳನ್ನೇ ಬಿಡಿಸುವ ಪದ್ಧತಿ ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಈ ಸುಮಾರಿಗೆ ಪ್ರಚಲಿತವಾದರೂ ಭಾರತೀಯ ಸಂಸ್ಕøತಿಯ ಆಶ್ರಯದಲ್ಲಿ ಇದು ಇನ್ನೂ ಮೊದಲೇ ಸಿದ್ಧವಾಗಿದ್ದ ಕಲೆಯಾಗಿತ್ತು. ಜೈನರ ಕಲ್ಪಸೂತ್ರಗಳಲ್ಲಿ, ಬೌದ್ಧರ ಪ್ರe್ಞÁಪಾರಮಿತಾ ಸೂತ್ರಗಳಲ್ಲಿ, ನೇಪಾಳ, ಟಿಬೆಟ್ ದೇಶಗಳಲ್ಲಿ ರಚಿತವಾದ ತಾಂತ್ರಿಕ ಗ್ರಂಥಗಳಲ್ಲಿ ಈ ಬಗೆಯ ಗೌಣ ಆಲೇಖ್ಯಗಳು ಪ್ರಾಚೀನವಾದುವು. ಯೂರೋಪ್‍ನಲ್ಲಿ 14ನೆಯ ಶತಮಾನದ ಪರಾರ್ಧದಲ್ಲಿ ವರ್ಣಚಿತ್ರಗಳಿಗೆ ಪೂರ್ವಭಾವಿಯಾಗಿಯೇ ಬರೆದುಕೊಂಡ ಅಲೇಖ್ಯಗಳ ಬಿಡಿ ಬಿಡಿ ಹಾಳೆಗಳು ದೊರೆತಿವೆ. ಕ್ರಿಸ್ತನ ಮರಣ, ಪುನರುತ್ಥಾನ ಮುಂತಾದ ಪ್ರಸಂಗಗಳನ್ನು ಪಾರ್ಚ್‍ಮೆಂಟ್‍ಗಳ ಮೇಲೆ ಸ್ಥೂಲರೇಖೆಗಳಲ್ಲಿ ಬರೆದುಕೊಂಡಿರುವುದು ಇಲ್ಲಿ ಕಾಣುತ್ತದೆ. ಇವನ್ನು ಕಾಂಪೂಸಿಷನಲ್ ಡ್ರ್ಯಾಫ್ಟ್ಸ್ ಎಂದು ಪಂಡಿತರು ನಿರ್ದೇಶಿಸಿದ್ದಾರೆ. ಇವುಗಳಲ್ಲಿ ಕೆಲವು ಹಳೆಯ ಚಿತ್ರಗಳ ಪ್ರತಿಕೃತಿಗಳಷ್ಟೆ. ಒಯೆರೈಲ್ ಎಂಬ ವಿದ್ವಾಂಸ ಈ ಹಾಳೆಗಳನ್ನು ಕೂಲಂಕಷವಾಗಿ ವಿಶ್ಲೇಷಣೆ ಮಾಡಿದ್ದಾನೆ. 

ಚಿತ್ರಕಲೆಯಲ್ಲಿ ಆಲೇಖ್ಯದ ಸ್ಥಾನವನ್ನು ಸ್ಪಷ್ಟಪಡಿಸಿದ ಕೀರ್ತಿ ಕ್ರಿಸ್ತಾಬ್ದ 14ನೆಯ ಶತಮಾನದ ಬೆನ್ನಿನೋ ಚೆನ್ನನಿ ಎಂಬ ಬರೆಹಗಾರನದು. ಅವನ ಪ್ರಕಾರ ಆಲೇಖ್ಯ ಪ್ರತಿಭಾಶಾಲಿಯಾದ ಕಲಾವಿದನಿಗೆ ಸಹಜಪ್ರವೃತ್ತಿ, ವಿದ್ಯಾರ್ಥಿಗೆ ಅನಿವಾರ್ಯವಾದ ಅಭ್ಯಾಸ. 1430ರಲ್ಲಿ ಚಿತ್ರಕಲೆಯ ಮೇಲೆ ಗ್ರಂಥವೊಂದನ್ನು ಬರೆದ ಆಲ್ಬರ್ಟಿ ಆಲೇಖ್ಯವನ್ನು ಚಿತ್ರದ ರಚನಾವ್ಯವಸ್ಥೆಗೆ ಸಮನಾದುದೆಂದು ಬಣ್ಣಿಸಿದ. ಚಿತ್ರಕ್ಕಾಗಲೀ ಶಿಲ್ಪಕ್ಕಾಗಲೀ ಇದೇ ಆಧಾರವೆಂದು ಅವನು ಒಪ್ಪಲಿಲ್ಲ. ಆದರೆ 1455ರಲ್ಲಿ ಲೋರೆನ್ಸೊ ಘಿಬೆರ್ಟಿ ಎಂಬ ವಿದ್ವಾಂಸ ಚಿತ್ರದ ಅಥವಾ ಶಿಲ್ಪದ ಹಿನ್ನೆಲೆಯಲ್ಲಿ ಅಗತ್ಯವಾಗಿ ಇರಬೇಕಾದ ತರ್ಕ, ಭಾವನಾವ್ಯವಸ್ಥೆ ಸಂಕಲ್ಪಗಳು ಆಲೇಖ್ಯದ ರೂಪವನ್ನು ತಳೆಯುವುದೆಂದು ವಾದಿಸಿದ. ಲಿಯೋನಾರ್ಡೋ ಡ ವಿಂಚಿ ತಾನು ನಿಸರ್ಗದಲ್ಲಿ ಅಧ್ಯಯನ ಮಾಡಿದ ವಸ್ತುಗಳನ್ನು ಪ್ರಸಂಗಗಳನ್ನು ಆಲೇಖ್ಯದಲ್ಲಿ ಮೂಡಿಸಿಡುತ್ತಿದ್ದ. ತನ್ನ ನಿರ್ಣಯಗಳನ್ನು ನಿರೂಪಿಸಲು ಆಲೇಖ್ಯವೊಂದು ವ್ಯವಧಾನ (ಇನ್ ಸ್ಟ್ರುಮೆಂಟ್). ಅಷ್ಟಲ್ಲದೆ, ಪ್ರಕೃತಿಯಲ್ಲಿನ ಪದಾರ್ಥಗಳನ್ನು ಚಿತ್ತ ಅಂತರ್ದೃಷ್ಟಿಯಿಂದ ಗ್ರಹಿಸುವಾಗ ಸ್ಥೂಲ ಆಕಾರದ ಹಿನ್ನೆಲೆಯಲ್ಲಿರುವ ರೇಖಾಮಯ ರಚನೆಯನ್ನು ಕಲ್ಪಿಸಿಕೊಳ್ಳುವುದೆಂದೂ ಇದೇ ಆಲೇಖ್ಯದ ಮೂಲವೆಂದೂ ಅವನ ವಾದವಾಗಿತ್ತು. ವೆನಿಸ್‍ನಲ್ಲಿ ಪವೋಲೋ ಪಿನೋ (1548) ಎಂಬುವವ ಚಿತ್ರಕ್ಕೆ ಆಲೇಖ್ಯ, ಕಲ್ಪನೆ, ಬಣ್ಣ ಎಂಬ ಮೂರು ಅಂಗಗಳನ್ನೂ ಹೇಳಿ ಆಲೇಖ್ಯ ಎಂಬುದನ್ನು ನಿರ್ಣಯ, ಮೇಲ್ಮೈ ನಿರೂಪಣೆ, ಸಂವಿಧಾನ, ನಿರ್ದಿಷ್ಟ ದೃಶ್ಯವ್ಯವಸ್ಥೆ ಎಂಬ ನಾಲ್ಕು ವಿಭಾಗಗಳಲ್ಲಿ ವಿವರಿಸಿದ, ನಿರ್ಣಯವೆಂಬುದು ಕಲೆಗಾರನ ಚಿತ್ತಭಿತ್ತಿಯಲ್ಲಿ ಮೂಡಿಬಂದ ಕಲ್ಪಿತಬಿಂಬ. ಲುಡೋವಿಕೊ ಡೋಲ್ಸೆ ಎಂಬುವವ ಆಲೇಖ್ಯವನ್ನು ದೃಶ್ಯವಸ್ತುಗಳಿಗೆ ಆಕೃತಿಯನ್ನು ಒದಗಿಸುವ ರೇಖೆಗಳ ವಿನ್ಯಾಸ ಎಂದು ನಿರ್ದೇಶಿಸಿದ. 

ಭೌತವಾಗಿ ನಾಮರೂಪಗಳ ವಿಶ್ವ ಸ್ಪಷ್ಟವಾಗುವ ಮುನ್ನ ಭಗವಂತನ ಕಲ್ಪನಾ ವ್ಯಾಪಾರಕ್ಕೂ ಆಲೇಖ್ಯಕ್ಕೂ ಸಾಮ್ಯವನ್ನು ನಿರೂಪಿಸಿದ ಸಾಹಸ ಆಂತಾನ್ ಫ್ರಾನ್ಸಿಸ್ಕೊ ದೋನಿಯದು (1549). ಆ ಯುಗದ ಅತ್ಯಂತ ಪ್ರತಿಭಾಶಾಲಿ ವಿಮರ್ಶಕ ಹಾಗೂ ಇತಿಹಾಸಕಾರನಾದ ಜಾರ್ಜಿಯೋ ವಸಾರಿ ಆಲೇಖ್ಯ ಬಾಹ್ಯವಸ್ತುವಿನ ಕಲ್ಪಿತಬಿಂಬವೆಂದೂ ಅದರ ಉಗಮಸ್ಥಾನ ಕಲೆಗಾರನ ಬುದ್ಧಿಶಕ್ತಿಯೆಂದೂ ಆದರೆ ಅದರ ಅಭಿವ್ಯಕ್ತಿ ಬುದ್ಧಿಶಕ್ತಿಗೆ ಅಧೀನವಲ್ಲವೆಂದೂ ಈ ಕಲ್ಪಿತಬಿಂಬ ಆಲೇಖ್ಯದ ನೆರವಿನಿಂದ ಮೂರ್ತಸ್ವರೂಪ ತಳೆಯುವುವೆಂದೂ ಹೇಳಿದ. ಫೆಡರಿಗೋ ಜಕಾರಿ ಎಂಬ ನವ್ಯ ಪ್ಲೇಟೋ ಸಿದ್ಧಾಂತ ಪ್ರತಿಪಾದಕ ಆಲೇಖ್ಯದ ಸ್ಪೂರ್ತಿ ಭಗವಂತನಿಂದಲೇ ಮನುಷ್ಯನ ಮನಸ್ಸಿನಲ್ಲಿ ಅವತರಿಸಿದ ಭಾವನೆ ಎಂಬ ವಾದವನ್ನು ಮಂಡಿಸಿದ. ಆಲೇಖ್ಯ ಚಿತ್ರಕಲೆಯ ತಂದೆ ಎಂಬ ಕಲ್ಪನೆ ಪ್ಯಾಸ್ಸರಿಯಿಂದ (1772) ಊರ್ಜಿತವಾಯಿತು. ಗ್ರಂಥ ಬರೆಯುವ ಮುನ್ನ ಗ್ರಂಥಕರ್ತೃ ವಿಷಯಗಳ ಮೇಲೆ ಟಿಪ್ಪಣಿಗಳನ್ನು ಸಿದ್ಧಮಾಡಿಕೊಂಡಂತೆ ಆಲೇಖ್ಯವೂ ಚಿತ್ರ ಸಿದ್ಧವಾಗಲು ನೆರವಾಗುತ್ತದೆ ಎಂದು ವೆನಿಸ್ ನಗರದ ಮಾರ್ಕೋ ಬೋಷಿನಿಯ ವಾದ. 

ಈ ಸಿದ್ಧಾಂತಗಳು ಏನೇ ಇರಲಿ, ಫ್ಲಾರೆಂಟೈನ್ ಕಲೆಗಾರನ ಆಲೇಖ್ಯವನ್ನು ಅತಿ ಮುಖ್ಯವಾಗಿ ಬಗೆದು ಜಗದ್ವಿಖ್ಯಾತವಾದ ಆಲೇಖ್ಯಗಳನ್ನು ಸಿದ್ಧಮಾಡಿದರು. ಲೊರೆನ್ಜೊ, ಗಿಲ್ಬೆರ್ಟಿ, ಏಂಜಲಿಕೊ, ಜನೋಬಿ, ಸ್ಟ್ರೋಜ್ಜಿ, ಬೆನೊಜೊ, ಗೊಜ್ಜೋಲಿ, ಪವೋಲೊ, ಡೊನಟೆಲ್ಲೊ, ಫಿಲಿಪ್ಪೊ ಲಿಪ್ಟಿ, ಆಂಟೋನಿಯೊ, ಪೋಲ್ಲ್ಯುಓಲೊ, ವೆರೋಕ್ಬಿಯೊ, ಡಾಮಿನಿಕೊ, ಫಿರ್ಲಾಂಡಜೋ, ಫ್ರಾನ್ಸಿಸ್ಕೊ ಡಿ ಜಾರ್ಜಿಯೋ - ಮುಂತಾದ ಕಲಾವಿದರ ಆಲೇಖ್ಯಗಳು ಪಾಶ್ಚಾತ್ಯಕಲೆಯ ಇತಿಹಾಸದಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದಿವೆ. ಸಾಂಸ್ಕøತಿಕ ಪುನರುಜ್ಜೀವನದ ಯುಗದಲ್ಲಿ ಮೈದಳೆದ ಜಾಕೊಪೊ ಬೆಲ್ಲಿನಿಯ ಆಲೇಖ್ಯಸಂಗ್ರಹ ಸ್ವಾರಸ್ಯವಾಗಿದೆ. ಹದಿನಾರನೆಯ ಶತಮಾನದ ಇಟಲಿಯಲ್ಲಿ ಆಲೇಖ್ಯ ಇನ್ನೂ ಹಿರಿಮೆಯ ಸ್ಥಾನವನ್ನು ಪಡೆಯಿತು. ವಿಶ್ವವಿಖ್ಯಾತ ಕಲೆಗಾರನಾದ ಲಿಯೋನಾರ್ಡೋ ಡ ವಿಂಚಿ ಮತ್ತು ಮೈಕೇಲ್ ಏಂಜಿಲೊಗಳ ಮತ್ತು ಇವರ ಅನುಯಾಯಿಗಳ ಆಲೇಖ್ಯಗಳು ವಿಪುಲವಾಗಿದೆ. ರ್ಯಾಫೆಲ್, ಪೆರುಜ್ಜಿ, ಬ್ರಮಾನ್ಟೆ, ಟೆಂಟಿರೊಟ್ಟೆ, ವೆರೊನೀಸ್ ಮುಂತಾದವರು ಈ ಜಾಡನ್ನೇ ಹಿಡಿದು ಆಲೇಖ್ಯದ ವೈಶಿಷ್ಟ್ಯದಿಂದಾದಿ ಕಲಾ ಕ್ರಾಂತಿಯನ್ನೇ ಉಂಟು ಮಾಡಿದರು. 
ಆಧುನಿಕ ಯುಗದಲ್ಲಿ ಆಲೇಖ್ಯದಂತೆಯೇ ಸರಳವಾದ ಚಿತ್ರಗಳನ್ನು ಬಿಡಿಸುವ ಪದ್ಧತಿ ಪ್ರವೃತ್ತವಾಗಿದೆ. ಹೋಮರ್ (1793), ಇಂಗ್ರೆಸ್, ಪೋಹ್ರ್ ಪಾಮರ್ ಮುಂತಾದವರು ತಮ್ಮ ಚಿತ್ರಗಳನ್ನು ಹೀಗೆಯೇ ರಚಿಸಿದ್ದಾರೆ. ಆಲೇಖ್ಯ ಬರಿಯ ರೇಖಾಮಯವಾಗಿರಬೇಕೆಂದು ಪ್ರಚಲಿತವಾದ ಮತ; ಅಷ್ಟಲ್ಲದೆ ಅದು ಧ್ವನಿಯಂತೆ ಅದರ ವಸ್ತುವನ್ನು ಸೂಚಿಸಬೇಕು. ಆಲೇಖ್ಯದಲ್ಲೇ ಕಲಾಕ್ರಿಯೆ ಸಂಪನ್ನವಾಗಿರದೆ ಅದು ಚಿತ್ರದಲ್ಲಿ ವ್ಯಕ್ತವಾಗುತ್ತದೆ. ಹೀಗೆ ಇದಕ್ಕೆ ಕಾವ್ಯದ ಲಕ್ಷಣಗಳನ್ನು ಹೇಳುವ ಆಧುನಿಕ ವಿಮರ್ಶಕರಿದ್ದಾರೆ. ಆದರೆ ಕೊರ್ಬೆ, ಮಿಲೆ, ಮುಂತಾದವರ ಆಲೇಖ್ಯಗಳು ಅಷ್ಟು ಉನ್ನತಮಟ್ಟದಲ್ಲವೆಂದು ತಜ್ಞರ ಅಭಿಮತ. 

ಭಾರತ ದೇಶದಲ್ಲಿ ಆಲೇಖ್ಯವೆಂಬುದು ತುಂಬ ಪ್ರಾಚೀನವಾದ ಕ್ರಿಯೆ. ಇದರ ಉಲ್ಲೇಖ ವಿಷ್ಣುಧರ್ಮೋತ್ತರದಲ್ಲಿ ಬರುತ್ತದೆ. ಆಲೇಖ್ಯವಿನೋದ ಎಂಬ ಶಬ್ದ ಹಲವು ಪ್ರಾಚೀನ ಸಂಸ್ಕøತ ಕಾವ್ಯಗಳಲ್ಲಿ ಕಾಣಬರುತ್ತದೆ. ಚಿತ್ರಕಲೆಯ ಅಂಗವಾಗಿ ಆಲೇಖ್ಯವನ್ನು ಸಿದ್ಧಮಾಡಿಕೊಳ್ಳುತ್ತಿದ್ದ ಪದ್ಧತಿ ನಾಲ್ಕು-ಐದನೆಯ ಶತಮಾನಗಳಲ್ಲೇ ಸ್ಪಷ್ಟವಾಗುತ್ತದೆ. ಗುಪ್ತಶೈಲಿಯ ಶಿಲ್ಪದಲ್ಲಿ ಕೂಡ ಆಲೇಖ್ಯ ಅಗತ್ಯವಾದ ಸನ್ನಾಹ. ಆದರೆ ಆಲೇಖ್ಯ ವಿಶಿಷ್ಟವಾದ ಕಲೆಯಾಗಿ ಮೈದಳೆದದ್ದು ಕ್ರಿಸ್ತಾಬ್ದ 16ನೆಯ ಶತಮಾನದ ಆದಿಭಾಗದಲ್ಲಿ; ಪರ್ಷಿಯಾ ದೇಶದಿಂದ ಮೊಗಲ ಅರಸರ ಆಸ್ಥಾನಕ್ಕೆ ಬಂದ ಕಲಾವಿದರು ಈ ಕಲೆಯನ್ನು ತಮ್ಮೊಂದಿಗೆ ತಂದರು. ಪರ್ಷಿಯ ದೇಶಕ್ಕೆ ಅದು ಬಂದುದು ಚೀನ ದೇಶದಿಂದ ಎಂದು ಹೇಳುತ್ತಾರೆ. ಆ ಕಾಲಕ್ಕೆ ಮುಂಚೆ ಆಲೇಖ್ಯವಿರಲಿಲ್ಲವೆಂದಲ್ಲ. ಭಿತ್ತಿಚಿತ್ರಗಳಲ್ಲಿ, ಗುಹ್ಯಾಚಿತ್ರಗಳಲ್ಲಿ, ನಿದರ್ಶನಕ್ಕೆ ಅಜಂತಾ, ಬಾಗ್, ಸಿತ್ತನವಾಸಲ್ ಕಲಾಶೈಲಿಗಳಲ್ಲಿ ರೇಖಾಚಿತ್ರಗಳನ್ನು ಆಲೇಖ್ಯಗಳನ್ನೂ ಕಾಣುತ್ತೇವೆ. ಆದರೆ ಸ್ವತಂತ್ರವಾದ ಸಂವಿಧಾನದಂತೆ ಬೆಳೆದದ್ದು ಮೊಗಲ್ ಅರಸರ ಆಶ್ರಯದಲ್ಲಿಯೇ. ಆಲೇಖ್ಯಗಳನ್ನು ಸ್ವಸಂಪೂರ್ಣವಾಗಿಯೇ ಉಳಿಸಿಕೊಂಡು ಬರುವ ಪದ್ಧತಿಗೆ ಇರಾನೀ ಕಲಂ ಎಂದು ಹೆಸರು. ಈ ಆಲೇಖ್ಯಕಾರರಿಗೆ ಆದರ್ಶ ಪ್ರಾಯರಾದವರು ಬಿಹ್‍ಜಾದ್, ಆಖಾ ರಿಜಾ ಮತ್ತು ರಿಜಾ ಇ ಅಬ್ಬಾಸಿ. ಎಂಬ ಪರ್ಷಿಯ ಕಲೆಗಾರರು. ಈ ಪದ್ಧತಿಯಲ್ಲಿ ಬಿಳಿ ಹಾಳೆಗಳ ಮೇಲೆ ಕರಿ ಶಾಯಿಯಿಂದ ಲೆಕ್ಕಣಿಕೆಯ ಮುಳ್ಳನ್ನು ಉಪಯೋಗಿಸಿ ಬರೆಯುತ್ತಿದ್ದರು. ಕೆಲವೊಮ್ಮೆ ಕುಂಚಾಗ್ರದಿಂದ ಕೆಂಪು, ಹಸಿರು, ನೀಲಿ, ಸುವರ್ಣ ಈ ಬಣ್ಣಗಳನ್ನು ಮೂಡಿಸುತ್ತಿದ್ದರು. ಮೊಗಲ್ ಚಕ್ರವರ್ತಿಗಳಲ್ಲಿ ಜಹಾಂಗೀರನಿಗೆ (ಆಳ್ವಿಕೆ 1605-1627) ಆಲೇಖ್ಯಗಳ ಮೇಲೆ ತುಂಬ ಪ್ರೀತಿಯಿತ್ತು. ಇವನ ಮತ್ತು ಷಹಜಹಾನನ ಕಾಲದಲ್ಲಿ (1628-1658) ಆಲೇಖ್ಯ ತುಂಬ ಪ್ರಚಲಿತವಾದ ಕಲೆಯಾಗಿತ್ತು. ಜಹಾಂಗೀರ್ ತನ್ನ ತಾರುಣ್ಯದಲ್ಲಿ ಕಾಂದಹಾರದಿಂದ ಆಖಾ ರಿಜಾ ಎಂಬ ಪರ್ಷಿಯನ್ ಕಲೆಗಾರನನ್ನು ಭಾರತಕ್ಕೆ ಕರೆಸಿಕೊಂಡು ಅವನನ್ನು ತನ್ನ ಮಿತ್ರನಾಗಿಸಿಕೊಂಡಿದ್ದ. ಮೊಗಲ್ ಆಸ್ಥಾನಕ್ಕೆ ಧರ್ಮಪ್ರಚಾರದ ದೃಷ್ಟಿಯಿಂದ ಬಂದ ಚೆಸ್ಯೊಟ್ ಜನರು ತಮ್ಮೊಂದಿಗೆ ಆಲೇಖ್ಯ ಸಂವಿಧಾನಗಳನ್ನು ತಂದರು. ನಾದಿರ್-ಅಸ್-ಸಮಾನ್, ಮನ್ಸೂರ್ ಮುಂತಾದವರು ಈ ಪ್ರಭಾವದಿಂದ ಕಾಣಿಸಿಕೊಂಡ ಆಲೇಖ್ಯಕಾರರು. ಮೊಗಲ ರಾಜವಂಶದ ಅವನತಿಯಾದ ಅನಂತರ ಈ ಕಲೆಗೂ ಗ್ಲಾನಿಯೊದಗಿತು. ದಕ್ಷಿಣದಲ್ಲಿ ಎರಡನೆಯ ಇಬ್ರಾಹಿಂ (1580-1626) ಮತ್ತು ಬಿಜಾಪುರದ ದೊರೆ ಮಹಮ್ಮದ್ ಆದಿಲ್ ಷಾ (1626-1656) ಇವರೂ ಆಲೇಖ್ಯವನ್ನು ಪ್ರೋತ್ಸಾಹಿಸಿದ ಅರಸರಲ್ಲಿ ಪ್ರಮುಖರು. ತಿರುವಾಂಕೂರು ಸಂಸ್ಥಾನದಲ್ಲಿ ಈ ಕಲೆ ದೇವದೇವತೆಗಳ ಚಿತ್ರಣಕ್ಕೆಂದು ಮೀಸಲಾಗಿದ್ದಂತೆ ತೋರಿಬರುತ್ತದೆ. ಅಲ್ಲಿನ ಹಲವಾರು ದೇವಾಲಯಗಳಲ್ಲಿ ಉತ್ತಮ ಆಲೇಖ್ಯಗಳಿವೆ. ಲೇಪಾಕ್ಷಿಯ ವೀರಭದ್ರಾಲಯದಲ್ಲೂ ಆಲೇಖ್ಯಗಳೆನ್ನಬಹುದಾದ ಚಿತ್ರಗಳಿವೆ. ಶ್ರೀರಂಗಪಟ್ಟಣದ ದರಿಯಾ ದೌಲತ್ ಅರಮನೆಯ ಭಿತ್ತಿಗಳಲ್ಲಿ ಆಲೇಖ್ಯದ ಪ್ರಭಾವವನ್ನು ಕಾಣಬಹುದು. ಪಾಶ್ಚಾತ್ಯ ಕಲಾವಿದರು ಆ ಕಾಲದಲ್ಲಿ ಮಾಡಿದ ಆಲೇಖ್ಯಗಳನ್ನು ಅಲ್ಲಿಯೇ ಇಟ್ಟಿದ್ದಾರೆ. ನಾಗಾರ್ಜುನ ಕೊಂಡ ಮುಂತಾದೆಡೆ ಕಲ್ಲುಗಳ ಮೇಲೆ ಮೂಡಿಸಿದ ಆಲೇಖ್ಯಗಳಿವೆ. ಈ ಪ್ರಾಚೀನ ಪದ್ಧತಿ ಬಹುಕಾಲ ಉಳಿದು ಬಂದಿತು.

ಚೀನ ಮತ್ತು ಜಪಾನ್ ದೇಶಗಳಲ್ಲಿ ಆಲೇಖ್ಯಗಳನ್ನು ಕುಂಚಾಗ್ರದಿಂದಲೇ ಬಿಡಿಸುತ್ತಿದ್ದುದರಿಂದ ಆಲೇಖ್ಯಕ್ಕೂ ಚಿತ್ರಕ್ಕೂ ಅಷ್ಟಾಗಿ ವ್ಯತ್ಯಾಸ ಕಾಣಬರಲಿಲ್ಲ. ರೇಖಾಮಯವಾದ ಚಿತ್ರವನ್ನು ಫಿಎಃ-ಹುವಾ ಎಂದು ಚೀನೀ ಜನರು ಕರೆದು ಬಹುಮಟ್ಟಿಗೆ ಇದನ್ನು ಅಕ್ಷರವಿನ್ಯಾಸಕ್ಕೆ ಬಳಸುತ್ತಿದ್ದರು. ಇದಲ್ಲದೆ ಅರಮನೆ, ದೇಗುಲ, ಗೋಪುರ, ಸೇತುವೆ, ಇವುಗಳನ್ನು ನೈಜವಾಗಿ ಅತ್ಯಂತ ಕೂಲಂಕುಶವಾಗಿ ಯಾವ ವಿವರವನ್ನೂ ಬಿಡದೆ ರೇಖೆಗಳಲ್ಲಿಯೇ ಚಿತ್ರಿಸುವ ಪ್ರತಿಭೆ ಈ ಜನಕ್ಕಿತ್ತು. ಚೀನೀ ಕಲೆಯ ವಿಶೇಷವೆಂದರೆ ಸಂಪನ್ನವಾದ ಚಿತ್ರ ಬಿಡಿಸುವ ಮುನ್ನ ಇವರು ಆಲೇಖ್ಯಗಳನ್ನು ಸಿದ್ಧಪಡಿಸಿಕೊಳ್ಳುತ್ತಿರಲಿಲ್ಲ. ಕಾಗದವನ್ನೂ ರೇಷ್ಮೆ ವಸ್ತ್ರವನ್ನೂ ಹದ ಮಾಡಿಕೊಂಡು ಒಡನೆಯೇ ವರ್ಣಸಂಯೋಜನೆಗೆ ಆರಂಭಿಸುತ್ತಿದ್ದರು. ಆಲೇಖ್ಯ ಅಲ್ಲಲ್ಲಿ ಬಳಕೆಯಲ್ಲಿದ್ದಾಗಲೂ ಅದಕ್ಕೆಂದೇ ವಿಶಿಷ್ಟವಾದ ಯಾವ ಸಾಮಗ್ರಿಯನ್ನೂ ಚೀನೀ ಜನ ಸೃಷ್ಟಿ ಮಾಡಲಿಲ್ಲ. ಆದರೆ ಜಪಾನಿಯರು ಆಲೇಖ್ಯಕ್ಕೆಂದೇ ಮೊಹಿತು ಎಂಬ ಕುಂಚ ವಿಶೇಷವನ್ನು ಬಳಸುತ್ತಿದ್ದರು. ಈ ಕುಂಚದಿಂದ ಕರಿಶಾಯಿಯಲ್ಲಿ (ಸುಮಿ) ಮೇಲ್ಮೈರೇಖೆಗಳನ್ನು ಮೊದಲು ಮೂಡಿಸಿ, ಅನಂತರ ಅವುಗಳ ಒಳಗೆ ಬಣ್ಣಗಳನ್ನು ತುಂಬುತ್ತಿದ್ದರು. ವಸ್ತುಗಳನ್ನು ಹಲವಾರು ಭಂಗಿಗಳಲ್ಲಿ ರೇಖೆಗಳಿಂದ ಚಿತ್ರಿಸಿಕೊಳ್ಳುವುದೂ ಈ ದೇಶದಲ್ಲಿ ತುಂಬ ಬಳಕೆಯಲ್ಲಿತ್ತು. ಹಳೆಯ ಪ್ರಸಿದ್ಧ ಚಿತ್ರಗಳನ್ನು ಅಭ್ಯಸಿಸುವಾಗ ಅಥವಾ ತಮ್ಮ ಪ್ರಯೋಜನಕ್ಕೆಂದು ಅವುಗಳ ಪ್ರತಿಕೃತಿಗಳನ್ನು ಮಾಡಿಕೊಳ್ಳುವಾಗ ಇದೇ ಪದ್ಧತಿಯನ್ನು ಅನುಸರಿಸುತ್ತಿದ್ದರು. ಚೀನೀಯರಂತಲ್ಲದೆ ಜಪಾನೀ ಜನ ಚಿತ್ರದ ಪೂರ್ವದಲ್ಲಿ ಆಲೇಖ್ಯವನ್ನು ಸಿದ್ಧಗೊಳಿಸುತ್ತಿದ್ದರು. ಇಂಥ ಆಲೇಖ್ಯಗಳಿಗೆ ಷಿತ-ಎ ಎಂದು ಕರೆಯುತ್ತಾರೆ. ಸಂಪನ್ನವಾದ ಚಿತ್ರ ಮುಗಿದ ಮೇಲೂ ಪ್ರಮುಖವಾದ ವಿವರಗಳನ್ನೂ ಮೇಲ್ಮೈ ರೇಖೆಗಳನ್ನೂ ಮತ್ತೊಮ್ಮೆ ತಿದ್ದುವುದೂ ಬಳಕೆಯಲ್ಲಿತ್ತು. ಈ ಆಲೇಖ್ಯವಿಶೇಷಕ್ಕೆ ಕಾಕಿಯೋಕೋಶಿ ಎಂದು ಹೆಸರಿತ್ತು. ಬಣ್ಣಗಳಿಂದ ಮೊದಲು ಹಾಕಿದ ರೇಖೆಗಳು ಮರೆಯಾಗಬಾರದೆಂಬ ನಿಯಮ ಜಪಾನೀ ಕಲೆಯಲ್ಲಿತ್ತು. ಚೀನದಿಂದ 13ನೆಯ ಶತಮಾನದಲ್ಲಿ ಜಪಾನ್ ದೇಶಕ್ಕೆ ಬಂದ ಆಲೇಖ್ಯಸಂಪ್ರದಾಯವೊಂದು ಸುಮಿ-ಎ ಎನಿಸಿಕೊಳ್ಳುತ್ತದೆ. ಇದು ಕರಿಶಾಯಿಯಿಂದ ಬಿಳಿ ಕಾಗದದ ಮೇಲೆ ಮೇಲ್ಮೈಯಿಲ್ಲದೆ ತುಂಬಿಸುವ ಸ್ಥೂಲ ವಿವರಗಳದ್ದಾಗಿದೆ. 19ನೆಯ ಶತಮಾನದ ಅಂತ್ಯಭಾಗದಲ್ಲಿ ಜಪಾನೀಯರು ಇದ್ದಿಲು ತುಂಡು, ಪೆನ್ಸಿಲ್, ಗ್ರಾಫೈಟ್ ಕೋಂಟೆ ಪೆನ್ಸಿಲ್ ಮುಂತಾದುವನ್ನು ಆಲೇಖ್ಯ ಸಾಮಗ್ರಿಗಳನ್ನಾಗಿ ಸ್ವೀಕರಿಸಿದರು.									
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ